ಪ್ರೀತಿಯಲ್ಲಿ ಬಿದ್ದಿದ್ದೀರಾ? ಪೋಷಕರನ್ನು ಒಪ್ಪಿಸಲು ಕೆಲವು ಟಿಪ್ಸ್

ಪ್ರೀತಿ ಮಾಡಿದ ವ್ಯಕ್ತಿ ಬಿಟ್ಟು ಬೇರೆಯವರನ್ನು ಮದುವೆಯಾಗಲು ಮನಸ್ಸು ಒಪ್ಪುವುದಿಲ್ಲ. ಪಾಲಕರ ಒತ್ತಾಯಕ್ಕೆ ಅವರು ಹೇಳಿರುವ ಹುಡುಗನನ್ನು ಮದುವೆ ಮಾಡಿಕೊಳ್ಳುತ್ತಾರೆ. ಆದ್ರೆ ಕೆಲ ಟ್ರಿಕ್ಸ್ ಮೂಲಕ ನಿಮ್ಮ ಪ್ರೀತಿಯನ್ನು ಪಾಲಕರು ಒಪ್ಪುವಂತೆ ಮಾಡಬಹುದು.

ಇಂದಿನ ದಿನಗಳಲ್ಲಿ ಪ್ರೇಮ ವಿವಾಹದ ಮೇಲೆ ನಂಬಿಕೆ ಜಾಸ್ತಿಯಾಗಿದೆ. ಬಹುತೇಕರು ಪ್ರೇಮ ವಿವಾಹವನ್ನು ಇಷ್ಟಪಡ್ತಾರೆ. ಕೆಲ ಪಾಲಕರು ಸುಲಭವಾಗಿ ಮಕ್ಕಳ ಪ್ರೀತಿಗೆ ಗ್ರೀನ್ ಸಿಗ್ನಲ್ ನೀಡ್ತಾರೆ. ಆದ್ರೆ ಭಾರತದಲ್ಲಿ ಈಗ್ಲೂ ಲವ್ ಮ್ಯಾರೇಜನ್ನು ಸಂಪೂರ್ಣವಾಗಿ ಜನರು ಒಪ್ಪಿಕೊಂಡಿಲ್ಲ. ಅನೇಕ ಪಾಲಕರು ಮಕ್ಕಳ ಆಯ್ಕೆಯನ್ನು ಒಪ್ಪಿಕೊಳ್ಳುವುದಿಲ್ಲ. ಹಾಗೆಯೇ ಜಾತಿ, ಧರ್ಮ ಕೂಡ ಈಗ್ಲೂ ಸಮಸ್ಯೆಯಾಗುತ್ತಿದೆ.

ಪಾಲಕರು ಪ್ರೀತಿಸಿದ ವ್ಯಕ್ತಿಯಿಂದ ದೂರವಾಗುವಂತೆ ಮಕ್ಕಳಿಗೆ ಒತ್ತಡ ಹೇರಲು ಶುರು ಮಾಡ್ತಾರೆ. ಆದ್ರೆ ಪ್ರೀತಿಸಿದ ವ್ಯಕ್ತಿ ಬಿಡುವುದು ಹೇಳಿದಷ್ಟು ಸುಲಭವಲ್ಲ. ಪಾಲಕರನ್ನು ಒಪ್ಪಿಸಿ, ಪ್ರೀತಿಸಿದ ವ್ಯಕ್ತಿ ಕೈ ಹಿಡಿಯಬೇಕೆಂದು ಅನೇಕ ಮಕ್ಕಳು ಆಸೆ ಹೊಂದಿರುತ್ತಾರೆ. ಅವರಲ್ಲಿ ನೀವೂ ಒಬ್ಬರಾಗಿದ್ದರೆ, ಪಾಲಕರನ್ನು ಹೇಗೆ ಒಪ್ಪಿಸೋದು ಎನ್ನುವುದಕ್ಕೆ ನಾವೊಂದಿಷ್ಟು ಸಲಹೆ ನೀಡ್ತೇವೆ.

ಮುಂಚಿತವಾಗಿ ಪೋಷಕರಿಗೆ ಸಿಗ್ನಲ್ ನೀಡಲು ಶುರು ಮಾಡಿ:
ಪಾಲಕರಿಗೆ ತಮ್ಮ ಪ್ರೀತಿ ವಿಷಯವನ್ನು ಕೊನೆ ಕ್ಷಣದಲ್ಲಿ ಹೇಳುವ ಮಕ್ಕಳ ಸಂಖ್ಯೆ ಹೆಚ್ಚು. ಪಾಲಕರು ಮದುವೆ ನಿಶ್ಚಿಯಿಸಿದ ಮೇಲೆ ತನ್ನ ಪ್ರೀತಿ ಹೇಳುವವರು ಇದ್ದಾರೆ. ಸಂದರ್ಭದಲ್ಲಿ ಪಾಲಕರು ಮಕ್ಕಳ ಪ್ರೀತಿ ಒಪ್ಪಲು ಸಾಧ್ಯವಿಲ್ಲ. ಹಾಗಾಗಿ ಅವರಿಗೆ ಮುಂಚಿತವಾಗಿ ಕೆಲವು ಸುಳಿವುಗಳನ್ನು ನೀಡಲು ಪ್ರಾರಂಭಿಸಬೇಕು. ಇದು ನಿಮ್ಮ ಕುಟುಂಬದ ಸದಸ್ಯರಿಗೆ ಆಘಾತವನ್ನುಂಟು ಮಾಡುವುದಿಲ್ಲ ಮತ್ತು ಅವರು ನಿಮ್ಮೊಂದಿಗೆ ಮಾತನಾಡಬಹುದು.

ಸಕಾರಾತ್ಮಕ ವಾತಾವರಣದಲ್ಲಿ ಮಾತ್ರ ಮಾತನಾಡಿ:
ನಿಮ್ಮ ಗೆಳತಿಯ ಬಗ್ಗೆ ಪಾಲಕರಿಗೆ ತಿಳಿಸಲು ಮುಂದಾಗಿದ್ದರೆ ಪೋಷಕರ ಮನಸ್ಥಿತಿ ಬಗ್ಗೆ ನೀವು ಗಮನ ಹರಿಸಬೇಕು. ಅವರ ಮನಸ್ಥಿತಿ ಚೆನ್ನಾಗಿದೆಯೇ ಎಂಬುದನ್ನು ನೋಡಬೇಕು. ಸಂತೋಷದ ವಾತಾವರಣದಲ್ಲಿ ನೀವು ವಿಷಯವನ್ನು ಹೇಳಿದಾಗ ಅವರು ಕೋಪಗೊಳ್ಳುವುದು ಕಡಿಮೆ. ಹಾಗೆಯೇ ನಿಮ್ಮ ಸಂಗಾತಿ ಭೇಟಿಗೆ ದಿನಾಂಕವನ್ನು ಅವರು ಫಿಕ್ಸ್ ಮಾಡಬಹುದು. ಅದೇ ಮನೆ ವಾತಾವರಣ ಸರಿಯಿಲ್ಲದ ಸಂದರ್ಭದಲ್ಲಿ ನೀವು ವಿಷ್ಯ ಹೇಳಿದ್ರೆ ಅವರ ಕೋಪ ನೆತ್ತಿಗೇರಬಹುದು. ನಿಮ್ಮ ಪ್ರೀತಿಯನ್ನು ಅವರು ನಿರಾಕರಿಸಬಹುದು

ತಾಳ್ಮೆಯಿಂದಿರುವುದು ಬಹಳ ಮುಖ್ಯ:
ಪ್ರೇಮ ವಿವಾಹಕ್ಕೆ ಪಾಲಕರನ್ನು ಒಪ್ಪಿಸಲು ವಿಫಲವಾಗಲು ಮುಖ್ಯ ಕಾರಣ ತಾಳ್ಮೆ ಕೂಡ ಒಂದು. ಪೋಷಕರ ಮನವೊಲಿಸುವುದು ಅಷ್ಟು ಸುಲಭದ ಕೆಲಸವಲ್ಲವಾದರೂ ಅವರು ಕ್ರಮೇಣ ನಿಮ್ಮ ಮಾತನ್ನು ಒಪ್ಪಬಹುದು. ಇದಕ್ಕೆ ದಿನ, ವಾರ, ತಿಂಗಳು ಹಿಡಿಯಬಹುದು. ಪಾಲಕರು ಕೂಡ ತಮ್ಮ ಮಗವಿಗೆ ಸಮಯಕ್ಕೆ ಸರಿಯಾಗಿ ಮದುವೆಯಾಗಬೇಕೆಂದು ಬಯಸುತ್ತಾರೆ. ಆದ್ದರಿಂದ ನೀವು ನಿಮ್ಮ ಒತ್ತಾಯಕ್ಕೆ ಬದ್ಧರಾದಾಗ, ಅವರು ನಿಮ್ಮ ಪ್ರೀತಿಯನ್ನು ನಂಬಲು ಪ್ರಾರಂಭಿಸುತ್ತಾರೆ ಮತ್ತು ಅಂತಿಮವಾಗಿ ಅವರು ನಿಮ್ಮ ಆಯ್ಕೆಯನ್ನು ಒಪ್ಪುತ್ತಾರೆ. ಆದ್ರೆ ಅಲ್ಲಿಯವರೆಗೆ ಕಾಯುವ ತಾಳ್ಮೆ ಬೇಕು.

ಪ್ರೇಮ ವಿವಾಹವಾದವರ ಉದಾಹರಣೆ ನೀಡಿ:
ಅನೇಕ ಪಾಲಕರು ಪ್ರೇಮ ವಿವಾಹದ ಮೇಲೆ ವಿಶ್ವಾಸವಿಡುವುದಿಲ್ಲ. ದಾಂಪತ್ಯ ಬೇಗ ಮುರಿದು ಬೀಳುತ್ತದೆ ಎಂಬ ಭಾವನೆಯಲ್ಲಿರುತ್ತಾರೆ. ಅವರನ್ನು ನೀವು ಮನವೊಲಿಸಬೇಕು. ಸಂದರ್ಭದಲ್ಲಿ ನಿಮ್ಮ ಕುಟುಂಬದಲ್ಲಿ ನಡೆದ ಅಥವಾ ಸ್ನೇಹಿತರಲ್ಲಿ ನಡೆದ ಪ್ರೇಮ ವಿವಾಹವನ್ನು ಉದಾಹರಣೆಯಾಗಿ ನೀಡಬಹುದು. ಅರೇಂಜ್ಡ್ ಮ್ಯಾರೇಜ್ ಜೊತೆಗೆ ಪ್ರೇಮವಿವಾಹದ ಬಗ್ಗೆಯೂ ಅವರಿಗೆ ಅರಿವು ಮೂಡಿಸಬೇಕು.